ನಗರ ಯೋಜನೆ -
ನಗರ ಪ್ರದೇಶಗಳ ಬೆಳವಣಿಗೆ ಮತ್ತು ಬದಲಾವಣೆಗಳಿಗೆ ನಿರ್ದಿಷ್ಟ ಮಾರ್ಗದರ್ಶನ ಮಾಡಲು ಇರುವ ಏರ್ಪಾಡು (ಸಿಟಿ ಪ್ಲ್ಯಾನಿಂಗ್). ಕಟ್ಟಡಗಳ ವ್ಯವಸ್ಥಿತ ನಿರ್ಮಾಣ, ರಸ್ತೆ ಚರಂಡಿ ಉದ್ಯಾನವನ ಮೊದಲಾದವುಗಳ ಅಳವಡಿಕೆ, ನಾಗರಿಕರ ದೈಹಿಕ ಹಾಗೂ ಮಾನಸಿಕಾರೋಗ್ಯರಕ್ಷಣೆ, ಸಾಮಾಜಿಕ ಜೀವನದಲ್ಲಿ ಸ್ವಾಸ್ಥ್ಯ ಕಾಪಾಡುವಿಕೆ ಮುಂತಾದ ವಿವಿಧ ಕರ್ತವ್ಯಗಳು ನಗರಯೋಜನೆಯ ವ್ಯಾಪ್ತಿಯಲ್ಲಿ ಬರುತ್ತವೆ.

ಚಿತ್ರ-1

	ಸೀಮಿತ ಭೌಗೋಲಿಕ ಪ್ರದೇಶದಲ್ಲಿ ಅಧಿಕ ಸಂಸಾರಗಳು ದಟ್ಟಯಿಸಲು ಕಾರಣಗಳು ಹಲವಾರು: ಅಧಿಕ ಉದ್ಯೋಗಾವಕಾಶಗಳು ಮತ್ತು ವಿವಿಧ ಸೇವಾ ವ್ಯವಸ್ಥೆಗಳು ಇವುಗಳ ಪೈಕಿ ಪ್ರಧಾನವಾದವು. ಈ ಜನವಸತಿಗಳನ್ನು ಲಂಗುಲಗಾಮಿಲ್ಲದೇ ಬೆಳೆಯಲು ಬಿಟ್ಟುದಾದರೆ ಪ್ರತಿಯೊಂದು ನಗರವೂ ಭಾರೀ ಕೊಳಚೆಗುಂಡಿ ಆಗುವುದರಲ್ಲಿ ಸಂದೇಹವಿಲ್ಲ. ತತ್ಪರಿಣಾಮವಾಗಿ ಜನಾರೋಗ್ಯ ಕೆಡುವುದು; ನಾಗರಿಕ ಜೀವನದಲ್ಲಿ ಕ್ಷೋಭೆ ತಲೆದೋರುವುದು. ಆದ್ದರಿಂದ ನಗರದ ವ್ಯವಸ್ಥಿತ ಅಭಿವರ್ಧನೆ ತೀರ ಅಗತ್ಯ. ಕ್ರಿ.ಪೂ. 3000ದಷ್ಟು ಹಿಂದೆಯೇ ನಗರಯೋಜನೆ ಅಸ್ತಿತ್ವಕ್ಕೆ ಬಂದಿತ್ತೆಂಬುದನ್ನು ಇತಿಹಾಸದ ಪರಿಶೀಲನೆಯಿಂದ ಅರಿಯಬಹುದು. ಭಾರತ, ಗ್ರೀಸ್, ಈಜಿಪ್ಟ್, ಚೀನ, ಮಾಯ ಮುಂತಾದ ಎಲ್ಲ ಪ್ರಾಚೀನ ನಾಗರಿಕತೆಗಳೂ ನಗರ ಯೋಜನೆಯನ್ನು ಆಚರಣೆಗೆ ತಂದು ಜನಜೀವನವನ್ನು ಸುವ್ಯವಸ್ಥೆಯ ಹಾದಿಯಲ್ಲಿ ಕೊಂಡೊಯ್ಯುತ್ತಿದ್ದವು. ಉದಾಹರಣೆಗೆ ತಕ್ಷಶಿಲೆ, ಹರಪ್ಪ, ಮೊಹೆಂಜೊದಾರೊ ನಗರಗಳಲ್ಲಿ ಇಟ್ಟಿಗೆಗಳಿಂದ ಕಟ್ಟಿದ ಉಪ್ಪರಿಗೆ ಮನೆಗಳ ಸಾಲುಗಳೇ ಇದ್ದುವು, ಒಳಚರಂಡಿ ವ್ಯವಸ್ಥೆ ಇತ್ತು. 

ಚಿತ್ರ-2

ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ಹರಿಯುತ್ತಿದ್ದ ಅಗಲ ಹಾದಿಗಳಿದ್ದುವು. ನಾಗರಿಕರ ಅವಶ್ಯಕತೆ ಮತ್ತು ಮನೋರಂಜನೆಗಳಿಗೆ ಬೇಕಾದ ವಿವಿಧ ಸಾರ್ವಜನಿಕ ಗೃಹಗಳಿದ್ದುವು.

	ಪ್ರಾಚೀನ ಕಾಲದ ಭಾರತದಲ್ಲಿ ಪ್ರಚಾರದಲ್ಲಿದ್ದ ವಿಶಿಷ್ಟ ಮಾದರಿಯ ನಗರ ಯೋಜನೆಗಳ ಪೈಕಿ ಕೆಲವೊಂದರ ನಕ್ಷೆಗಳನ್ನು ಇಲ್ಲಿ ಕಾಣಿಸಿದೆ. ಅಯೋಧ್ಯೆ, ಇಂದ್ರಪ್ರಸ್ಥ, ಪಾಟಲೀಪುತ್ರ, ಮಧುರೆ, ಕಾಂಚೀಪುರ, ಕಾವೇರಿಪಟ್ಟಣಂ ಮೊದಲಾದ ಪ್ರಸಿದ್ಧ ನಗರಗಳು ಅಂದಿನ ವಾಸ್ತುಶಿಲ್ಪಕ್ಕೆ ಜ್ವಲಂತ ನಿದರ್ಶನಗಳು. 

ಚಿತ್ರ-3

5,500 ಮೀಟರ್ ಉದ್ದ ಮತ್ತು 1,400 ಮೀಟರ್ ಅಗಲಕ್ಕೆ ಹರಡಿದ್ದ ಅಯೋಧ್ಯಾ ನಗರ, ಅದು ಒದಗಿಸಿದ್ದ ಸೌಕರ್ಯಗಳ, ಅಂತೆಯೇ ವಿಶಾಲ ಮಾರ್ಗ ಉದ್ಯಾನವನ ಸಭಾಂಗಣ ಅಂಗಡಿ ಮೊದಲಾದ ಸೇವೆಗಳ, ದೃಷ್ಟಿಯಿಂದ ಇಂದಿನ ಯಾವುದೇ ಉತ್ತಮ ನಗರಕ್ಕೆ ಸವಾಲಾಗುವಂತಿತ್ತು. ಅರಮನೆ ಅಥವಾ ದೇವಾಲಯ ನಗರಕೇಂದ್ರವಾಗಿದ್ದು ಅದರ ಸುತ್ತ ವ್ಯವಸ್ಥಿತ ನಕ್ಷೆಯ ರೀತ್ಯ ನಗರವನ್ನು ಕಟ್ಟುತ್ತಿದ್ದುದು ವಾಡಿಕೆ.

	ಇತಿಹಾಸ ಕಾಲದಲ್ಲಿ-ಉದಾಹರಣೆಗೆ ಪಾಂಡ್ಯರು, ಚೋಳರು, ರಜಪೂತರು, ಮೊಗಲರು-ನಗರಗಳು ಅರಸರ ವೈಭವದ ಪ್ರತೀಕಗಳಾಗಿ ಕಲೆಗಳ ಬೀಡಾಗಿ ರೂಪಗೊಂಡದ್ದನ್ನು ಕಾಣಬಹುದು. ಮಧುರೆ, ಫತೇಪುರ್ ಸಿಖ್ರಿ, ಹಂಪೆ ಮೊದಲಾದವು ಉದಾಹರಣೆಗಳು. ಹಂಪೆಯ ನಿರ್ಮಾಣ ಪೂರ್ಣವಾಗಿ ಸ್ಥಳೀಯ ಭೌಗೋಲಿಕ ಸನ್ನಿವೇಶವನ್ನು ಪರಿಗಣಿಸಿ ನಡೆದಿತ್ತು. 

ಚಿತ್ರ-4

16ನೆಯ ಶತಮಾನದಷ್ಟು ಹಿಂದಿನ ಕಾಲದಲ್ಲಿಯೇ ಈ ನಗರದ ಜನಸಂಖ್ಯೆ ಎರಡು ಲಕ್ಷದಿಂದ ಐದು ಲಕ್ಷದವರೆಗೆ ಇತ್ತೆಂಬುದನ್ನು ಗಮನಿಸುವಾಗ ನಗರಯೋಜನೆ ಯಾವ ಹಿರಿಮಟ್ಟಕ್ಕೆ ಇದ್ದಿತ್ತು ಎಂಬುದನ್ನು ಊಹಿಸಿಕೊಳ್ಳಬಹುದು. ಹದಿನೆಂಟನೆಯ ಶತಮಾನದಲ್ಲಿ ನಿರ್ಮಾಣಗೊಂಡ ಜಯಪುರವನ್ನು ಇಲ್ಲಿ ಉಲ್ಲೇಖಿಸುವುದು ಅಗತ್ಯ. ಇಮ್ಮಡಿ ಜಯಸಿಂಗ್ ಮಹಾರಾಜ ಇದರ ನಿರ್ಮಾಪಕ. ಸಿದ್ಧನಕ್ಷೆಯ ಅನುಸಾರ ಇದರ ರಚನೆ ಆಗಿದೆ. ಜಾಲ ಮಾದರಿಯ (ಗ್ರಿಡ್) ರಸ್ತೆಗಳು, ಜನವಸತಿ ಸೌಕರ್ಯಗಳು, ಕೋಟೆ ರಕ್ಷಣೆ, ಕುಡಿವ ನೀರಿನ ಏರ್ಪಾಟು ಮೊದಲಾದವನ್ನು ಇಲ್ಲಿ ನೋಡಬಹುದು. ಸಾರಾಂಶವಿಷ್ಟು: ಪ್ರಾಚೀನ ಕಾಲದಿಂದ ಅರ್ವಾಚೀನ ಕಾಲದಲ್ಲಿ ಆಂಗ್ಲರ ಆಗಮನದ ತನಕ ಭಾರತದ ಮಹಾನಗರಗಳು ವೈಜ್ಞಾನಿಕ ಯೋಜನೆಯ ಅನುಸಾರ ಮೈದಳೆದು ಬೆಳೆದುಬಂದಿದ್ದವು. 

ಚಿತ್ರ-5

ಈ ನೆಲದ ಸ್ಥಿತಿಗತಿ ಹವೆ ಸಂಸ್ಕøತಿ ಆಶೆ ಆಕಾಂಕ್ಷೆ ಮುಂತಾದವನ್ನು ಅನುಲಕ್ಷಿಸಿ ಸೌಂದರ್ಯಪ್ರಜ್ಞೆಯನ್ನು ಕಳೆದುಕೊಳ್ಳದೆ ಉಪಯುಕ್ತವಾಗುವ ತರದಲ್ಲಿ ಈ ನಗರಗಳಿದ್ದುವು.

	ಬ್ರಿಟಿಷರು ಭಾರತಕ್ಕೆ ಬಂದು ಬೇರೂರಿ ನೆಲಸಿ ಇಲ್ಲಿನ ಸ್ಥಿತಿಗತಿಗಳನ್ನು ಅರಿಯಲು ಸಾಕಷ್ಟು ವರ್ಷಗಳೇ ಬೇಕಾದವು. ಈ ನಡುವೆ ಸ್ಥಳೀಯ ನಗರ ಯೋಜನೆಯ ಪ್ರಗತಿ ಸ್ಥಗಿತವಾಯಿತು. ಬ್ರಿಟಿಷರು ತಮ್ಮ ಅನುಕೂಲತೆಗೆ ಅನುಗುಣವಾಗಿ ದಂಡು ಪ್ರದೇಶಗಳನ್ನೂ ಉಪನಗರಗಳನ್ನೂ ಕಟ್ಟತೊಡಗಿದರು. ಹೀಗೆ ಹೊಸತೇ ಯೋಜನೆಯೊಂದು ಈ ನೆಲದ ಮೇಲೆ ಹೇರಲ್ಪಟ್ಟಿತು. ಬಡತನ, ಅನಾಸ್ಥೆ ಮುಂತಾದವೂ ಇದರೊಂದಿಗೆ ಸೇರಿ ದೇಶ ಸ್ವಾತಂತ್ರ್ಯ ಗಳಿಸುವ ಹೊತ್ತಿಗೆ (1947) ನಗರೋಪನಗರಗಳು ವಿಶೇಷವಾದ ಯಾವುದೇ ಯೋಜನೆ ಇಲ್ಲದೇ ಬೇಕಾಬಿಟ್ಟಿ ಬೆಳೆಯುತ್ತಿದ್ದುದು ಕಂಡುಬರುತ್ತದೆ. ಕೊಳಚೆ ಪ್ರದೇಶಗಳು ಪ್ರತಿಯೊಂದು ನಗರಕ್ಕೂ ತಗಲಿರುವ ಶಾಪವೇ ಆಗಿವೆ.

ಚಿತ್ರ-6

	ಬ್ರಿಟಿಷರ ಆಳ್ವಿಕೆಯಲ್ಲಿ ನಗರಯೋಜನೆಯನ್ನು ಕುರಿತಂತೆ ಆಗಿಂದಾಗ ಹಲವಾರು ಕಾಯಿದೆಗಳು ಜಾರಿಗೆ ಬಂದುವು. ದೊಡ್ಡ ನಗರಗಳ ಯೋಗಕ್ಷೇಮವನ್ನು ಗಮನಿಸಿ ಜನಜೀವನವನ್ನು ನಿಯಂತ್ರಿಸುವ ಕೇಂದ್ರೀಯ ವ್ಯವಸ್ಥೆಯೊಂದರ ಅವಶ್ಯಕತೆಯನ್ನು ಸರ್ಕಾರ ಮನಗಂಡುದರ ಫಲವಾಗಿ ಪುರಸಭೆಗಳ ಕಾಯಿದೆ ಮಂಜೂರಾಗಿ ಅಸ್ತಿತ್ವಕ್ಕೆ ಬಂದಿತು. ಉದಾಹರಣೆಗೆ 1862ರಲ್ಲಿ ಮೈದಳೆದ ಬೆಂಗಳೂರು ಮತ್ತು ಮೈಸೂರು ಪುರಸಭೆಗಳು. ಮಂಗಳೂರು ಹಾಗೂ ಹೊಸಪೇಟೆ ಪುರಸಭೆಗಳು ಕೂಡ ಒಂದು ಶತಮಾನಕ್ಕಿಂತ ಹಳೆಯವು. ಪುರಸಭೆಗಳ ಸ್ಥಾಪನೆಯೊಂದಿಗೆ ಒಂದೊಂದು ಹಿರಿನಗರದಲ್ಲೂ ನಗರಾಭಿವೃದ್ಧಿ ಮಂಡಳಿ ಸ್ಥಾಪನೆಗೊಂಡು ಹೊಸ ಬಡಾವಣೆಗಳ ನಿರ್ಮಾಣ ಮತ್ತು ಸಾಮೂಹಿಕ ಗೃಹಗಳ ರಚನೆಗಳನ್ನು ಕೈಗೆತ್ತಿಕೊಂಡಿವೆ. ಅದೇ ವೇಳೆ ಇಡೀ ರಾಜ್ಯಕ್ಕೆ ಅನ್ವಯವಾಗುವ ಗೃಹನಿರ್ಮಾಣಮಂಡಳಿಗಳೂ ಕ್ರಿಯೋದ್ಯುಕ್ತವಾಗಿ ಆಧುನಿಕ ಗೃಹಗಳ ನಿರ್ಮಾಣವನ್ನು ಮಾಡುತ್ತಿವೆ.

	ನಗರಗಳನ್ನು ವ್ಯಾಪಕವಾಗಿ ಸಂಸ್ಥಾ ಕೇಂದ್ರಗಳು, ವಾಣಿಜ್ಯ ಕೇಂದ್ರಗಳು, ಕೈಗಾರಿಕಾ ಕೇಂದ್ರಗಳು, ಜಾತ್ರೆ ಮತ್ತು ಕ್ರೀಡಾಕೇಂದ್ರಗಳು, ಮಹಾನಗರಗಳು ಎಂಬುದಾಗಿ ಅವವುಗಳ ಪ್ರಧಾನ ಗುಣಧರ್ಮಗಳನ್ನು ಗಮನಿಸಿ ವಿಂಗಡಿಸುವುದುಂಟು. ಉದಾಹರಣೆಗೆ ಭದ್ರಾವತಿಯನ್ನು ಕೈಗಾರಿಕಾ ಕೇಂದ್ರವೆಂದೂ ಕಲ್ಕತ್ತವನ್ನು ಮಹಾನಗರವೆಂದೂ ನವದೆಹಲಿಯನ್ನು ಸಂಸ್ಥಾಕೇಂದ್ರವೆಂದೂ ಮುಂಬಯಿಯನ್ನು ವಾಣಿಜ್ಯ ಕೇಂದ್ರವೆಂದೂ ಮುಂತಾಗಿ ಹೇಳಬಹುದು. ಅದೇ ರೀತಿ ಮಣಿಪಾಲ ವಿದ್ಯಾ ಕೇಂದ್ರವಾಗಿದೆ. ಕಾಶಿ ಪುಣ್ಯಕ್ಷೇತ್ರವಾಗಿದೆ. ಇಲ್ಲೆಲ್ಲ ನಗರಗಳು ಆಯಾ ಗುಣಧರ್ಮಾನುಸಾರ ವಿಕಸಿಸಿರುವುದನ್ನು ಗಮನಿಸಬಹುದು.

	ವರ್ತಮಾನ ಕಾಲದಲ್ಲಿ ನಗರಯೋಜನೆಯನ್ನು ವೈಜ್ಞಾನಿಕವಾಗಿ ಮಾಡಲಾಗುತ್ತಿದೆ. ಅದರ ವಿವಿಧ ಹಂತಗಳನ್ನು ಮುಂದೆ ವಿವರಿಸಿದೆ.

	ಮೊದಲನೆಯದಾಗಿ, ನಗರನಿವೇಶನವನ್ನು ಯೋಗ್ಯ ಸ್ಥಳದಲ್ಲಿ ಆಯಬೇಕು, ಬಳಿಕ ಇದನ್ನು ಅನುಕೂಲತೆಗೆ ತಕ್ಕಂತೆ ವಿಭಾಗಗಳಾಗಿ ವಿಂಗಡಿಸಬೇಕು. ಸಾಮಾಜಿಕ ಕೇಂದ್ರಗಳು, ನೆರೆಹೊರೆಗಳು ಮುಂತಾದವು ಇವುಗಳಲ್ಲಿ ಸೇರುತ್ತವೆ.

ಚಿತ್ರ-7

	ಎರಡನೆಯದಾಗಿ, ಯೋಜನೆಯ ಸಿದ್ಧತೆ. ಭವಿಷ್ಯದಲ್ಲಿ ಇಪ್ಪತ್ತರಿಂದ ಮೂವತ್ತು ವರ್ಷಗಳ ತನಕ ನಗರದ ಬೆಳವಣಿಗೆಯನ್ನು ಲಕ್ಷ್ಯದಲ್ಲಿ ಇರಿಸಿಕೊಂಡು ಇದನ್ನು ಸಿದ್ಧಗೊಳಿಸಬೇಕಾಗುವುದು. ಜನಸಂಖ್ಯೆಯ ಏರಿಳಿತಗಳಿಗೆ ಮತ್ತು ಜನರ ವಸತಿಸೌಕರ್ಯಗಳಿಗೆ ಆದ್ಯಗಮನ ಹರಿಸುವುದು ಅವಶ್ಯ.

ಚಿತ್ರ-8

 ಈ ಮುಂದಿನ ಹದಿನಾಲ್ಕು ಅಂಶಗಳನ್ನು ಪರಿಶೀಲಿಸುವುದು ಅಪೇಕ್ಷಣೀಯ; ನಗರ ವಿಸ್ತೀರ್ಣ, ಮೇಲ್ಮೈಲಕ್ಷಣಸಮೀಕ್ಷೆ, ಪ್ರಚಲಿತ ಭೂಉಪಯೋಗ, ಕಟ್ಟಡಗಳ ಪರಿಸ್ಥಿತಿ, ಜನಸಾಂದ್ರತೆ, ಸಾಮಾಜಿಕಾರ್ಥಿಕ ಪರಿಸ್ಥಿತಿ, ಸಂಚಾರಸೌಲಭ್ಯಗಳು, ಸಾರ್ವಜನಿಕ ಆವಶ್ಯಕತೆಗಳು, ಸೇವಾವ್ಯವಸ್ಥೆ, ಗೃಹಸಮಸ್ಯೆ, ಕ್ರೀಡಾ ಮತ್ತು ವಿಹಾರ ಸೌಲಭ್ಯ, ವ್ಯಾಪಾರ ಮತ್ತು ವಾಣಿಜ್ಯ, ಕೈಗಾರಿಕಾ ಸಮೀಕ್ಷೆ, ಸಾರ್ವಜನಿಕ ಮತ್ತು ಸಾಮಾಜಿಕೋಪಯೋಗಗಳು.

	ಮೂರನೆಯದಾಗಿ, ಮೇಲಿನ ಸಕಲ ಅಂಶಗಳನ್ನೂ ಸ್ಪಷ್ಟವಾಗಿ ವ್ಯಕ್ತಪಡಿಸಬಲ್ಲ ನಕ್ಷೆ, ಅಂಕೆ ಅಂಶಗಳ ಯಾದಿ, ಗ್ರಾಫ್ ಮೊದಲಾದವನ್ನು ತಯಾರಿಸಬೇಕು. ಮಾಹಿತಿ-ಚಿತ್ರಗಳ ಈ ಸಮನ್ವಯದಿಂದ ನಗರದ ರೂಪರೇಖೆಗಳು ಸ್ಪಷ್ಟವಾಗುತ್ತವೆ.

	ನಾಲ್ಕನೆಯದಾಗಿ, ನಗರ ನೈರ್ಮಲ್ಯವನ್ನು ಕುರಿತ ಆ ನಗರಕ್ಕೆ ಹೊಂದುವಂಥ ಯೋಜನೆಯನ್ನು ತಯಾರಿಸಿ ನಗರ ಯೋಜನೆಗೆ ಪೊರ್ದಿಸಬೇಕು. ನೀರಿನ ಸರಬರಾಜು ಅಂತೆಯೇ ಮಲಿನ ಜಲದ ವಿಲೇವಾರಿ ಕಡೆ ಆದ್ಯಲಕ್ಷ್ಯವೀಯುವುದು ಅಗತ್ಯ.

	ಐದನೆಯದಾಗಿ, ಇಂಥ ಸಮಗ್ರ ಯೋಜನೆಯ ಖರ್ಚನ್ನು ಅಂದಾಜುಮಾಡಿ ಮುಂಗಡ ಪತ್ರವನ್ನು ತಯಾರಿಸಬೇಕು. ಆರ್ಥಿಕ ತಹಬಂದಿಗೆ ಒಳಪಡದ ಯಾವ ಯೋಜನೆಯೂ ಕಾರ್ಯಗತವಾಗದು.

	ಆರನೆಯದಾಗಿ, ಪರಿಪೂರ್ಣವಾದ ನಗರಯೋಜನೆಗೆ ಸರ್ಕಾರದ ಬೆಂಬಲ ಕಾಯ್ದೆಯ ಮೂಲಕ ದೊರೆಯಬೇಕು.

	ನಗರಗಳ ಬೆಳವಣಿಗೆಯನ್ನು ವೈಜ್ಞಾನಿಕವಾಗಿ ನಿರ್ವಹಿಸುವುದೊಂದೇ ಇಂದಿನ ತೀವ್ರಭೂದಾಹವನ್ನು ಸಮರ್ಥವಾಗಿ ಎದುರಿಸುವ ಹಾದಿ.									(ಎನ್.ಜೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ